ಕದಂಬ : ರೂಬಿಯೇಸೀ ಕುಟುಂಬಕ್ಕೆ ಸೇರಿದ ಸುಂದರವಾದ ಹೂ ಬಿಡುವ ಮರ. == ವೈಜ್ಞಾನಿಕ ಹೆಸರು == ಆಂಥೊಸೆಫಾಲಸ್ ಕದಂಬ ಇದರ ವೈಜ್ಞಾನಿಕ ನಾಮ. ಕಡವಳಮರ ಪರ್ಯಾಯನಾಮ. == ಹರಡುವಿಕೆ == ಭಾರತದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಮರವನ್ನು ಇದರ ಸುಂದರವಾದ ಹೂಗಳಿಗಾಗಿ ಉದ್ಯಾನವನಗಳಲ್ಲಿ, ರಸ್ತೆಗಳ ಪಕ್ಕಗಳಲ್ಲಿ ಬೆಳೆಸುತ್ತಾರೆ. == ಲಕ್ಷಣಗಳು == ಇದು ಸು. 9 ಮೀ ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರ. ತೊಗಟೆ ಬೂದು ಬಣ್ಣದ್ದಾಗಿದ್ದು ನಯವಾಗಿದೆ. ತೊಗಟೆಯ ಒಳಭಾಗದ ಬಣ್ಣ ಹಳದಿ ಮಿಶ್ರಿತ ಕಂದು. ವಯಸ್ಸಾದ ಮರದ ತೊಗಟೆ ಉದ್ದವಾಗಿ ಸೀಳಿ ಚಚ್ಚೌಕ ಬಿಲ್ಲೆಗಳಾಗಿ ಉದುರುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ, ಅಂಚು ನಯ ಮತ್ತು ತುದಿ ಮೊನಚು. ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು. ಚೆಂಡಿನಂತೆ ಆಕಾರ ಹೂಗಳು ಕಿತ್ತಳೆ ಬಣ್ಣದವು. ಸುಗಂಧಪುರಿತವೂ ಹೌದು. ಕ್ರಮೇಣ ಹೂಗಳು ಚಿನ್ನದ ಬಣ್ಣ ತಾಳುತ್ತವೆ. ಫಲ ಸಣ್ಣ ಸಣ್ಣ ಬೀಜಗಳನ್ನೊಳಗೊಂಡ ಸಂಪುಟ ಮಾದರಿಯದು. ಕದಂಬ ಮರವನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು. == ಉಪಯೋಗಗಳು == ಇದರ ಹಣ್ಣುಗಳು ರುಚಿಯಾಗಿರುವುದರಿಂದ ಮನುಷ್ಯರೂ ಪ್ರಾಣಿ ಪಕ್ಷಿಗಳೂ ತಿನ್ನುವುದುಂಟು. ಕೆನೆ ಅಥವಾ ಮಾಸಲು ಬಿಳಿ ಬಣ್ಣದ ಇದರ ಚೌಬೀನೆ ಅಷ್ಟಾಗಿ ಬಾಳಿಕೆ ಬರುವುದಿಲ್ಲ. ಆದರೆ ಅದನ್ನು ಸುಲಭವಾಗಿ ಕೊಯ್ಯಬಹುದು, ಹದಮಾಡಬಹುದು. ಮೆದುವಾಗಿರುವುದರಿಂದ ಬೆಂಕಿಪೆಟ್ಟಿಗೆ, ಸಾಗಾಣಿಕೆ ಪೆಟ್ಟಿಗೆ ಮಾಡಲು ಉಪಯೋಗಿಸುತ್ತಾರೆ. == ಔಷಧೀಯ ಗುಣಗಳು == ಇದರ ತೊಗಟೆಯನ್ನು ಕಣ್ಣುನೋವಿನ ನಿವಾರಣೆಗೂ ಬಾಯಿಹುಣ್ಣಿಗೂ ಬಳಸುತ್ತಾರೆ. == ಉಲ್ಲೇಖಗಳು ==